ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಅಜ್ರಿ ಗೋಪಾಲ ಗಾಣಿಗ ಮತ್ತು ನರಾಡಿ ಬೋಜರಾಜ ಶೆಟ್ಟರಿಗೆ ಮಂದಾರ್ತಿ ಮೇಳದ ಸಂಸ್ಮರಣಾ ಪ್ರಶಸ್ತಿ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ಫೆಬ್ರವರಿ 13 , 2016

ಯಕ್ಷಗಾನ ಕಲಾಭಿಮಾನಿ, ಕಲಾವಿದರ ಶ್ರೇಯೋಭಿವೃದ್ದಿಗಾಗಿ ಹಲವಾರು ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಿಗಿಸಿಕೊಂಡು ಬಯಲಾಟದ ಕಲಾವಿದರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವ ಕಾವಡಿ ಸರಕಾರಿ ಪ್ರೌಡಶಾಲೆಯ ದೈಹಿಕ ಶಿಕ್ಷಕ ಚೇರ್ಕಾಡಿ ಅನಿಲಕುಮಾರ ಶೆಟ್ಟರು ಅಕಾಲದಲ್ಲಿ ದೈವಾದೀನರಾಗಿದ್ದು ಅವರ ಪ್ರಥಮ ವರ್ಷದ ಸಂಸ್ಮರಣೆಯಂದು ಶ್ರೀ ಮಂದಾರ್ತಿ ಮೇಳದ ಇಬ್ಬರು ಎರಡನೇ ವೇಷಧಾರಿಗಳಾದ ಅಜ್ರಿ ಗೋಪಾಲ ಗಾಣಿಗ ಮತ್ತು ನರಾಡಿ ಬೋಜರಾಜ ಶೆಟ್ಟರಿಗೆ ಅವರ ಸಂಸ್ಮರಣಾ ಪ್ರಶಸ್ತಿಯನ್ನು ನೀಡಲಾಗುವುದು.

ಅಜ್ರಿ ಗೋಪಾಲ ಗಾಣಿಗ ಮತ್ತು ನರಾಡಿ ಭೋಜರಾಜ ಶೆಟ್ಟಿ
ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಪೆ. 21 ಆದಿತ್ಯವಾರ ಚೇರ್ಕಾಡಿಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಲಿದೆ. ಬಳಿಕ ಖ್ಯಾತ ಕಲಾವಿದರಿಂದ ಜಾಂಬವತಿ ಕಲ್ಯಾಣ ಮತ್ತು ನಡುತಿಟ್ಟಿನ ಹಿರಿಯ ಕಲಾವಿದರಿಂದ ಸಂಪೂರ್ಣ ಕರ್ಣಾರ್ಜುನ ಕಾಳಗ ಯಕ್ಷಗಾನ ನೆರವೇರಲಿದೆ. ಸನ್ಮಾನಿಸಲ್ಪಡುವ ಕಲಾವಿದರ ಕಿರು ಪರಿಚಯ ಇಲ್ಲಿದೆ.

ಅಜ್ರಿ ಗೋಪಾಲ ಗಾಣಿಗ

ಬಡಗುತಿಟ್ಟಿನ ಒಂದು ಪ್ರಭೇದವಾದ ಹಾರಾಡಿ ತಿಟ್ಟಿನ ಪ್ರಾತಿನಿಧಿಕ ಕಲಾವಿದರಾದ ಗಾಣಿಗರು ಯಕ್ಷಗಾನದ ದಂತಕಥೆ, ರಾಷ್ಟ್ರಪ್ರಶಸ್ತಿ ಪುರಸ್ಕ್ರತ ಹಾರಾಡಿ ರಾಮ ಗಾಣಿಗರ ಮೊಮ್ಮಗ. ರಾಮ ಗಾಣಿಗರ ಹಾಗೆ ಕೇವಲ ಮಂದಾರ್ತಿ ಮೇಳವೊಂದರಲ್ಲೇ ಸುದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವವರು.

ಮಂದಾರ್ತಿ ಒಂದು ಮೇಳವಿರುವಾಗಲೇ ಎರಡನೇ ವೇಷದ ಪಟ್ಟವೇರಿದ ಇವರು ಇಂದು ಐದು ಮೇಳವಿರುವಾಗಲೂ ನಾಲ್ಕನೇ ಮೇಳದ ಪ್ರಧಾನ ಕಲಾವಿದರಾಗಿದ್ದಾರೆ. ಎರಡನೇ ವೇಷ, ಪುರುಷ ವೇಷವೆರಡನ್ನೂ ಮಾಡಬಲ್ಲ ಇವರ ಕರ್ಣಾರ್ಜುನದ ಅರ್ಜುನ, ಪುಷ್ಖಳ, ಸುಧನ್ವ ಮುಂತಾದ ಪುರುಷ ವೇಷಗಳು ಹಾರಾಡಿ ಕುಷ್ಟಗಾಣಿಗರ ಪಡಿಯಚ್ಚು.

ಯಕ್ಷಗಾನ ಭೂಪಟದಲ್ಲಿ ಅಜ್ರಿ ಎಂಬ ಹೆಸರನ್ನು ಗುರುತಿಸಲು ಕಾರಣರಾದ ಗಾಣಿಗರು ಕುಂದಾಪುರ ತಾಲೂಕು ಅಜ್ರಿ ಗ್ರಾಮದಲ್ಲಿ 1957ರಲ್ಲಿ ಮಂಜಯ್ಯ ಗಾಣಿಗ ಮತ್ತು ಮುತ್ತಮ್ಮ ದಂಪತಿಗಳ ಮಗನಾಗಿ ಜನಿಸಿದ ಇವರು ಏಳನೇ ತರಗತಿ ಅಭ್ಯಾಸ ಮಾಡಿ ಆರ್ಗೋಡು ಗೋವಿಂದರಾಯ ಶಣೈ ಮತ್ತು ನರಸಿಂಹ ಶೆಣೈಯವರ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದರು. ಸ್ವತಹ ಅರ್ಥದಾರಿಯಾಗಿದ್ದ ತಂದೆಯವರಿಂದ ಮಾತುಗಾರಿಕೆ ಕಲಿತ ಇವರು ಹೆಚ್ಚಿನ ಕಲಿಕೆಗಾಗಿ 1975ರಲ್ಲಿ ದಶಾವತಾರಿ ಗುರು ವೀರಭದ್ರ ನಾಯ್ಕರು ಶಿಕ್ಷಕರಾಗಿದ್ದ ಉಡುಪಿ ಯಕ್ಷಗಾನ ಕೇಂದ್ರಕ್ಕೆ ಪಾದಾರ್ಪಣೆ ಮಾಡಿದರು.

ಅಜ್ರಿ ಗೋಪಾಲ ಗಾಣಿಗ
ಅಲ್ಲಿ ಹೆರಂಜಾಲು ವೆಂಕಟರಮಣ ನೀಲಾವರ ರಾಮಕೃಷ್ಣಯ್ಯ, ಹಿರಿಯಡಕ ಗೋಪಾಲ ರಾಯರಂತ ಘಟಾನುಘಟಿಗಳ ವಿದ್ಯಾರ್ಥಿಯಾಗಿ ಯಕ್ಷಗಾನದ ವಿವಿದ ಅಂಗಗಳಲ್ಲಿ ಪರಿಪೂರ್ಣತೆ ಸಾದಿಸಿದರು. ಬಾಲ ಗೋಪಾಲ ಸಖಿ ಸ್ರೀವೇಷ ಮುಂತಾದ ಪಾತ್ರಗಳನ್ನು ಕಮಲಶಿಲೆ, ಸೌಕೂರು ರಂಜದಕಟ್ಟೆ ಪೆರ್ಡೂರು ಮೇಳಗಳಲ್ಲಿ ನೆರವೇರಿಸಿ ಇಡಗುಂಜಿ, ಮತ್ತು ಮೂಲ್ಕಿ ಡೇರೆ ಮೇಳಗಳಲ್ಲಿ ಪರಿಪೂರ್ಣ ಕಲಾವಿದರಾಗಿ ಮೂಡಿಬಂದರು.


1980ರಿಂದ ಸತತ 36 ವರ್ಷ ಮಂದಾರ್ತಿ ಮೇಳದ ಕಲಾವಿದರಾಗಿ ದುಡಿಯುತಿದ್ದಾರೆ. ವಂಡಾರು ಬಸವ ನಾಯರಿ, ಮೊಳಹಳ್ಳಿ ಹೆರಿಯ, ಎಂ. ಎ ನಾಯ್ಕ್, ಅರಾಟೆ ಮಂಜುನಾಥ ಕೆರಮನೆ ಶಂಭು ಹೆಗಡೆ ಮೋಹನದಾಸ ಶೆಣೈ ಮುಂತಾದವರ ಒಡನಾಡಿಯಾದ ಇವರ ಬೀಷ್ಮ, ಪರಶುರಾಮ, ರಾವಣ, ಹಿರಣ್ಯಕಶ್ಯಪು ಋುತುಪರ್ಣ, ಕಮಲಭೂಪ, ಭೀಮ ಮುಂತಾದ ಪಾತ್ರಗಳಲ್ಲಿ ವೀರಭದ್ರ ನಾಯ್ಕರ ಹೆಜ್ಜೆಗಾರಿಕೆ ಮತ್ತು ರಾಮಗಾಣಿಗರ ಛಾಪನ್ನು ಗುರುತಿಸಬಹುದು.


ಅತಿಕಾಯ, ಶಂತನು , ಬೀಷ್ಮನ ಪಾತ್ರಗಳಲ್ಲಿ ವೀರಭದ್ರ ನಾಯ್ಕರನ್ನೂ ಕರ್ಣ, ಜಾಂಬವ, ಹಿರಣ್ಯಕಶ್ಯಪುವಿನ ಪಾತ್ರದಲ್ಲಿ ರಾಮಗಾಣಿಗರ ವೇಷವನ್ನು ನೆನಪಿಸಬಹುದಾಗಿದೆ. ನಾಡಿನಾದ್ಯಂತ ಹಲವಾರು ಸನ್ಮಾನ ಪಡೆದ ಇವರು ಪತ್ನಿ ಹರಾಡಿ ರಾಮ ಗಾಣಿಗರ ಮೊಮ್ಮಗಳು ರೋಹಿಣಿ ಮೂವರು ಪುತ್ರಿಯರೊಂದಿಗೆ ಅಜ್ರಿಯಲ್ಲಿ ವಾಸವಾಗಿದ್ದಾರೆ.


ನರಾಡಿ ಭೋಜರಾಜ ಶೆಟ್ಟಿ

ಬಡಗುತಿಟ್ಟು ಪರಂಪರೆಯ ಸಿದ್ದಿ ಹಾಗು ಪ್ರಸಿದ್ದಿಯ ನೆಲೆಯಲ್ಲಿ ಗುರುತಿಸಲ್ಪಡುವ ಕಲಾವಿದರಲ್ಲಿ ನರಾಡಿ ಭೋಜರಾಜ ಶೆಟ್ಟರೂ ಒಬ್ಬರು. ಬಯಲಾಟ ರಂಗಸ್ಥಳದಲ್ಲಿ ಎರಡನೇ ವೇಷದಾರಿಗಳಾಗಿ ತಮ್ಮದೇ ಛಾಪನ್ನು ಮೂಡಿಸಿರುವ, ಐರೋಡಿ ಗೋವಿಂದಪ್ಪ, ಅಜ್ರಿ ಗೋಪಾಲ ಗಾಣಿಗ, ಕೋಡಿ ವಿಶ್ವನಾಥ ಗಾಣಿಗ, ಐರ್ ಬೈಲು ಆನಂದ ಶೆಟ್ಟಿ, ಆರ್ಗೋಡು ಮೋಹನದಾಸ ಶೆಣೈ, ಉಪ್ಪುಂದ ನಾಗೇಂದ್ರರವರ ಸಮಕಾಲೀನರಾದ ಇವರು ದೀರ್ಘಕಾಲದಿಂದ ಮಂದಾರ್ತಿ ಮೇಳದ ಎರಡನೆ ವೇಷಧಾರಿಯಾಗಿ ದುಡಿಯುತಿದ್ದಾರೆ.

ಕುಂದಾಪುರ ತಾಲೂಕಿನ ಶಿರಿಯಾರ ಸಮೀಪ ನರಾಡಿ ಎ೦ಬ ಪುಟ್ಟ ಗ್ರಾಮದಲ್ಲಿ ಸುಬ್ಬಣ್ಣ ಶೆಟ್ಟಿ ಮತ್ತು ನರಸಮ್ಮ ದಂಪತಿಯ ಪುತ್ರನಾಗಿ 1959ರಲ್ಲಿ ಜನಿಸಿದ ಇವರು ಅಚ್ಲಾಡಿ ಮದುವನದಲ್ಲಿ ಪ್ರಾಥಮಿಕ ಅಬ್ಯಾಸ ಪಡೆದು ಪರಿಸರದಲ್ಲಿ ನೆಡೆಯುತ್ತಿರುವ ಯಕ್ಷಗಾನ ಆಟದಲ್ಲಿ ಆಸಕ್ತಿ ಕುದುರಿ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಗುರು ನಾರ್ಣಪ್ಪ ಉಪ್ಪೂರರ ಶಿಷ್ಯನಾಗಿ ಸೇರಿಕೊಂಡು ಹೆಜ್ಜೆಗಾರಿಕೆ ಕಲಿತರು. ಉಪ್ಪೂರರ ಪ್ರೇರಣೆಯಂತೆ ತನ್ನ 16ನೇ ವಯಸ್ಸಿನಲ್ಲಿ ಅಮೃತೇಶ್ವರಿ ಮೇಳದಲ್ಲಿ ಗೆಜ್ಜೆ ಕಟ್ಟಿದರು.

ನರಾಡಿ ಭೋಜರಾಜ ಶೆಟ್ಟಿ
ಶಿರಿಯಾರ ಮಂಜುನಾಯ್ಕರ ಹೂವಿನಕೋಲಿನಲ್ಲಿ ಬಾಲ ಕಲಾವಿದರಾಗಿ ಕಾಣಿಸಿಕೊಳ್ಳುತಿದ್ದ ಇವರು ಮಂಜುನಾಯ್ಕರು ಮತ್ತು ಕೋಟ ವೈಕುಂಠನವರಲ್ಲಿ ಮಾತುಗಾರಿಕೆ ಕಲಿತು, ಸಾಲಿಗ್ರಾಮ ಮೇಳದ ಪುಂಡುವೇಷಧಾರಿಯಾಗಿ ಕಾಣಿಸಿಕೊಂಡರು. ಬಳಿಕ ಶಿರಸಿ, ಪೆರ್ಡೂರು, ಕಮಲಶಿಲೆ, ಸೌಕೂರು, ಮಾರಣಕಟ್ಟೆ ಮೇಳಗಳಲ್ಲಿ ಪುರುಷ ವೇಷಧಾರಿಯಾಗಿ ಸೇವೆ ಸಲ್ಲಿಸಿ ಕಳೆದ 18 ವರ್ಷದಿಂದ ಮಂದಾರ್ತಿ ಮೇಳದ ಪ್ರಧಾನ ಕಲಾವಿದರಾಗಿ ಸೇವೆ ಸಲ್ಲಿಸುತಿದ್ದಾರೆ.

1994ರಲ್ಲಿ ಅಮೃತೇಶ್ವರಿ ಮೇಳದ ಸಂಚಾಲಕತ್ವವನ್ನು ವಹಿಸಿಕೊಂಡ ಇವರು ಯಜಮಾನಿಕೆಯ ಸಿಹಿಕಹಿಯನ್ನೂ ಉಂಡವರು. ಎರಡನೇ ವೇಷ ಹಾಗೂ ಪುರುಷವೇಷಗಳಿಗೆ ಸಮಾನ ನ್ಯಾಯ ಒದಗಿಸಬಲ್ಲ ಇವರ ಕರ್ಣಾರ್ಜುನ ಕರ್ಣ ಹಾಗೂ ಅರ್ಜುನ, ಬೀಷ್ಮ ವಿಜಯದ ಬೀಷ್ಮ ಹಾಗೂ ಪರಶುರಾಮ, ವೀರಮಣಿ ಕಾಳಗದ ವೀರಮಣಿ ಹಾಗೂ ಪುಷ್ಕಳ ಹೀಗೆ ಎರಡೂ ಪತ್ರಗಳನ್ನು ನಿರ್ವಹಿಸಬಲ್ಲ ಸಾಮರ್ಥ್ಯವಿದ್ದವರು. ಕೃಷ್ಣಾರ್ಜುನದ ಅರ್ಜುನ ಮತ್ತು ನಳದಮಯಂತಿಯ ಋತುಪರ್ಣ ಇವರಿಗೆ ವಿಶೇಷ ಕೀರ್ತಿಯನ್ನು ತಂದಿತ್ತ ಪಾತ್ರಗಳು.

ಸುಂದರವಾದ‌ ಆಳಂಗ, ನೀಳಕಾಯ, ವಿಶಿಷ್ಟವಾದ ಶ್ರುತಿಬಧ್ಧತೆ. ಹಿತಮಿತವಾದ ಕುಣಿತ, ಪ್ರತ್ಯುತ್ಪನ್ನಮತಿತ್ವ, ಸಮರ್ಥವಾದ ಪದ್ಯದ ಎತ್ತುಗಡೆಯಿಂದ ಬಡಗಿನ ಹಿರಿಯ ಕಲಾವಿದರಾದ ಐರೋಡಿ ಗೋವಿಂದಪ್ಪ ಮತ್ತು ನಗರ ಜಗನ್ನಾಥ ಶೆಟ್ಟಿಯವರ ಉತ್ತರಾಧಿಕಾರಿಯಾಗಿ ಇವರನ್ನು ಗುರುತಿಸಬಹುದಾಗಿದೆ

ನಾರ್ಣಪ್ಪ‌ ಉಪ್ಪೂರರು, ಮರಿಯಪ್ಪಾಚಾರ್, ಶಿರಿಯಾರ ಮಂಜುನಾಯ್ಕರು, ಕೋಟ ವೈಕುಂಠ, ಅರಾಟೆ ಮಂಜುನಾಥ, ದುರ್ಗಪ್ಪ ಗುಡಿಗಾರ್, ಚಿಟ್ಟಾಣಿ, ಜಲವಳ್ಳಿ, ನಗರ ಜಗನ್ನಾಠ ಶೆಟ್ಟಿ, ಹಳ್ಳಾಡಿ ಮಂಜಯ್ಯ ಶೆಟ್ಟಿ, ಗೋಡೆ ನಾರಾಯಣ ಹೆಗಡೆ ಮುಂತಾದ ಘಟಾನುಘಟಿಗಳೊಂದಿಗೆ ತಿರುಗಾಟ ಮಾಡಿದ ಇವರು ಅತೀ ಸಣ್ಣ ವಯಸ್ಸಿನಲ್ಲಿ ಎರಡನೇ ವೇಷದ ಪಟ್ಟವೇರಿದವರು.

ನರಾಡಿಯವರು ಅತ್ಯುತ್ತಮ ನರ್ತಕರೆಂದು ಗುರುತಿಸಿಕೊಳ್ಳದಿದ್ದರೂ ಜಾಪಿನ ಮತ್ತು ತೂಕದ ಹೆಜ್ಜೆಗಾರಿಕೆ, ಕಟ್ಟುಮೀಶೆಯ ಹಾರಾಡಿ ಶೈಲಿ, ರಂಗಸ್ಥಳವನ್ನು ತುಂಬುವ ಅವರ ದೊಡ್ಡ ಗಾತ್ರದ ವೇಷ ಪಾತ್ರಕ್ಕೆ ತಕ್ಕಷ್ಟು ಮಾತುಗಾರಿಕೆ ಅವರ ಹೆಚ್ಚುಗಾರಿಕೆ. ಸೌಮ್ಯ ಪಾತ್ರಗಳನ್ನು ಭಾವಪೂರ್ಣವಾಗಿ ಅಭಿನಯಿಸಿರುವ ಇವರ ದಶರಥ, ಕರ್ಣ, ಮಾರ್ತಾಂಡತೇಜ, ಜಾಂಬವ, ವೀರಮಣಿ ಹಾಗೇಯೇ ಖಳ ಪಾತ್ರಗಳಾದ, ಕೌರವ, ರಾವಣ, ಹಿರಣ್ಯಕಶ್ಯಪು, ಕಂಸ, ಕಾಲನೇಮಿ, ಶುಂಭಾಸುರ, ಅಲ್ಲದೆ ಸುದನ್ವ, ತಾಮ್ರದ್ವಜ ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಪಡೆದಿವೆ.

ಸುದೀರ್ಘ ಕಾಲ 41 ವರ್ಷ ಕಲಾಸೇವೆ ಮಾಡಿ ಸದ್ಯ ಮಂದಾರ್ತಿ ಮೇಳದ ಕಲಾವಿದರಾಗಿರುವ ಇವರು ಪತ್ನಿ ಚಂದ್ರಾವತಿ, 3 ಮಕ್ಕಳೊಂದಿಗೆ ನರಾಡಿಯಲ್ಲಿ ವಾಸವಾಗಿದ್ದಾರೆ.


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ